ಆಂದ್ರಿಚ್, ಈವೊ
	(1892). ಯುಗೋಸ್ಲಾವಿಯದ ಕಾದಂಬರಿಕಾರ, ಕವಿ, ಕಥೆಗಾರ. ಮೊದಲ ಮಹಾಯುದ್ಧಕ್ಕೆ ಮೊದಲು ಯುಗೊಸ್ಲಾವಿಯದ ಐಕ್ಯಕ್ಕಾಗಿ ಹೋರಾಡಿದುದರಿಂದ ಆಸ್ಟ್ರಿಯದ ಆಡಳಿತಗಾರರು ಬಂಧನದಲ್ಲಿಟ್ಟರು. ಸ್ವತಂತ್ರ ಯುಗೊಸ್ಲಾವಿಯದಲ್ಲಿ ರಾಯಭಾರಿ ಶಾಖೆಯಲ್ಲಿ ಕೆಲಸ ಮಾಡಿದ. ಎರಡನೆಯ ಮಹಾಯುದ್ಧ, ಯುಗೊಸ್ಲಾವಿಯದಲ್ಲಿ ಹೊಸ ರಾಜಕೀಯ ಪಂಥದ ಆಡಳಿತದ ಪ್ರತಿಷ್ಠಾಪನೆ ಇವು ಹಲವು ಸಾಹಿತಿಗಳ ಅಸ್ತಮಯವನ್ನು ತಂದರೂ ಈತ ನಾಡಿನ ಅತ್ಯಂತ ಪ್ರಭಾವಯುತ, ಸನ್ಮಾನಿತ ಸಾಹಿತಿಗಳಲ್ಲಿ ಒಬ್ಬನಾಗಿ ಉಳಿದ. ಮನುಷ್ಯರ ನೋವಿನಲ್ಲಿ ಗಾಢವಾದ ಅನುಕಂಪ, ನಿಸರ್ಗದ ನಿಗೂಢತೆಯ ಎದುರಿನಲ್ಲಿ ಮನುಷ್ಯನ ಅಲ್ಪತ್ವಗಳು ಇವನ ಕೃತಿಗಳಲ್ಲಿ ಅಭಿವ್ಯಕ್ತಿ ಪಡೆದಿವೆ. ಇವನ ಶೈಲಿ ನಿಷ್ಕøಷ್ಟವೂ ಅಡಕವೂ ಆಗಿದೆ. ಬೊಸ್ನಿಯ ರೈತವರ್ಗವನ್ನು ಅಸಾಧಾರಣ ಯಶಸ್ಸಿನಿಂದ, ಕಣ್ಣಿಗೆ ಕಟ್ಟುವ ಹಾಗೆ, ಆತ್ಮೀಯವಾಗಿ ಈತ ಚಿತ್ರಿಸಿದ್ದಾನೆ. ಬೊಸ್ನಿಯವನ್ನು ಕುರಿತು ಈತ ಬರೆದಿರುವ ಮೂರು ಭಾಗದ ಕೃತಿಗೆ 1961ರಲ್ಲಿ ನೊಬೆಲ್ ಬಹುಮಾನ ದೊರೆಯಿತು.				  
  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ